Thursday, August 9, 2007

ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ

“ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು, ಬರೆದು ಹೆಸರ ಕಾಮನಬಿಲ್ಲು…”, ಮೊಬೈಲಿಂದ ಮುಂಗಾರು ಮಳೆಯ ಶೀರ್ಷಿಕೆ ಗೀತೆ ಕೇಳುತಲಿದ್ದೆ. ಹಾಗೆ ಬಸ್ಸಿನ ಕಿಡಕಿಯನ್ನ ಸ್ವಲ್ಪ ಸರಿಸಿದೆ. ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಬೆವರಿಳಿಯುವಷ್ಟು ಸೆಕೆ, ಒಡೋಡಿ ಬಂದು ಬಸ್ಸು ಹತ್ತಿದ ಕಾರಣ ಇನ್ನೂ ಜೋರಾಗೆ ಮೈ ಸುಡುತಿತ್ತು. ಹಾಡು ಕೇಳುತ್ತಾ ಮುಂಗಾರು ಮಳೆಯೊಳಗೆ ಹೊಕ್ಕಿದ್ದೆ.
“excuse me” ತುಸು ಜೋರಾಗೆ ಯಾರೊ ಕೂಗಿದ ಹಾಗೆ ಅನ್ನಿಸಿ ಕತ್ತು ತಿರುಗಿಸಿದರೆ, ಗಡಸು ಮುಖ ಮಾಡಿ ನಿಂತ ಹುಡುಗಿ!
“yes please” ಅಂದೆ.
“ವಿಂಡೊ ಪಕ್ಕ ಇರೋ ಸೀಟು ನಂದು, ನೀವು ಈಚೆ ಕುಳಿತುಕೊಳ್ಳಬೇಕಾಗತ್ತೆ.”
ನಾನಂದೆ, “Sorry, I was just relaxing, you can sit here.” ಎದ್ದು ಪಕ್ಕದ ಸೀಟಿನಲ್ಲಿ ಕೂತೆ.ಮತ್ತೆ ನನ್ನ ಮುಂಗಾರು ಮಳೆ ಹಾಡಿನ ಹುಚ್ಚು ಮುಂದುವರಿಯಿತು.

ಕಿವಿಗೆ ಇಯರ್ ಫೋನ್ ಹಾಕಿ ಸೀಟಿಗೊರಗಿ ಕೂತೆ. ಹಾಡಿಗೆ ತಲೆ ಆಡಿಸುತಿದ್ದ ಹಾಗೆ ಒಮ್ಮೆಲೆ ಬಟ್ಟಲು ಕಣ್ಣುಗಳ ಹುಡುಗಿ ಕಾಣಿಸಿದಂತೆ! ಹೌದು, ನನ್ನ ಪಕ್ಕ ಕೂತ ಹುಡುಗಿಯೆ ಅವಳು, ಕತ್ತು ತಿರುಗಿಸಿ ಮತ್ತೆ ಅವಳ ಕಡೆ ನೋಡಲು ಮುಜುಗರವಾಯ್ತು. ಕೈಯಲ್ಲಿದ್ದ ಟಿಕೆಟ್ ಕೆಳಗೆ ಬೀಳಿಸಿ, ಟಿಕೆಟ್ ಎತ್ತಲು ಕೆಳಗೆ ಬಗ್ಗುವಾಗ ಅವಳತ್ತ ಕಣ್ಣ ನೋಟ ಹರಿಸಿದೆ. ದುಂಡನೆಯ ಮುಖದಲ್ಲಿ ಪೂರ್ಣ ಚಂದ್ರರಿಬ್ಬರು ವಿರಾಜಿಸುವಂತಿದ್ದವು ಆ ಎರಡು ಬಟ್ಟಲು ಕಣ್ಣುಗಳು. ಆಗಲೆ ಎರಡು ನಿಮಿಷಗಳು ಕಳೆದು ಹೋದವು ಎಂಬ ಅರಿವಾಗಿ, ಮತ್ತೆ ಸೀಟಿಗೊರಗಿ ಕೂತೆ.

ಸಹಜವಾಗಿ ಕುಳಿತುಕೊಳ್ಳುವುದು ತುಸು ಕಷ್ಟವೆ ಆಯ್ತು. ಮುಂದಿನ ಹತ್ತು ನಿಮಿಷದಲ್ಲಿ ಕಡಿಮೆಯೆಂದರೂ ೫ ಬಾರಿ ಅವಳ ಬಟ್ಟಲು ಕಣ್ಣುಗಳ ಕದ್ದು ಕದ್ದು ನೋಡಿದೆ, ಅವಳು ನನ್ನತ್ತ ಗಮನ ಹರಿಸಲಿಲ್ಲ ಎಂಬ ಧೈರ್ಯದಿಂದ. ಆಕೆಯ ಮಾತಾಡಿಸಬೇಕೆಂಬ ಒಣ ಆಸೆ, ಆದರೆ ಮನಸಲ್ಲಿ ಧೈರ್ಯದ ಕೊರತೆ. ವಿಪರ್ಯಾಸವೇನೆಂದರೆ, ಆಕೆ ನನ್ನತ್ತ ತಿರುಗಿ ನೋಡುವ ಪ್ರಯತ್ನ ಮಾಡಲಿಲ್ಲ! ಆಕೆಯನ್ನ ಕದ್ದು ನೊಡುವ ನನ್ನ ಪ್ರಯತ್ನ ಮುಂದುವರಿಯುತ್ತಲೇ ಇತ್ತು, ಹಾಗೆ ಕೊನೆಗೂ ಆಕೆ ನನ್ನತ್ತ ಒಮ್ಮೆ ನೋಟ ಬೀರಿದಳು. ಅಷ್ಟರಲ್ಲಿ ಆ ಬಟ್ಟಲು ಕಣ್ಣುಗಳಿಗೆ ನಾನು ಸೋತು ಹೋಗಿದ್ದೆ. ಪ್ರಯತ್ನಪೂರ್ವಕವಾಗಿ ಕಷ್ಟ ಪಟ್ಟು ನಕ್ಕೆ, ಅವಳ ನಗು ಸಿಗಬಹುದೆಂಬ ಮಹದಾಸೆಯಿಂದ. ನನ್ನ ಸ್ವರ್ಗದ ಬಾಗಿಲು ತೆರಿದಿರಬೇಕು, ತುಟಿ ಬಿಚ್ಚಿ ನನ್ನ ನಗುವ ಹಿಂದಿರುಗಿಸಿದಳು, ಸ್ವರ್ಗಕ್ಕೆ ಮೂರೇ ಗೇಣು!

ಅಲ್ಲಿಗೆ ಮತ್ತೆ ಹತ್ತು ನಿಮಿಷಗಳು ಕಳೆದವು, ತಿರುಗಿ ಆಕೆಯ ಕಡೆ ನೋಡಲು ಭಯ, ನನ್ನ ಬಗ್ಗೆ bad impression ಬಂದರೆ ಎಂದು ಆತಂಕ.

“ಅಮ್ಮಾ” ಎಂದು ಜೋರಾಗಿ ಕೂಗುತಿರುವ ಎಳೆ ಮಗುವೊಂದು ನನ್ನ ಆಲೋಚನೆಯ ಲಹರಿಗೆ ಬ್ರೇಕ್ ಹಾಕಿತು. ಮಗುವಿನ ತಾಯಿ ತನ್ನೊಂದಿಗಿರುವ ಬಟ್ಟೆಗಳ ಬ್ಯಾಗ್ ಮತ್ತು ಅಳುತಿರುವ ಮಗುವಿನ ಜೊತೆ ಸರ್ಕಸ್ ಮಾಡುತಿದ್ದರು. ಎದ್ದು ಆ ತಾಯಿಯ ಬ್ಯಾಗ್ ಎತ್ತಿ ಮೇಲೆ ಇಟ್ಟು ಮತ್ತೆ ನನ್ನ ಸೀಟಿಗೊರಗಿದೆ. ಮಗುವಿನ್ನು ಅಳು ನಿಲ್ಲಿಸಿರಲಿಲ್ಲ. ಅಳುವ ಮಗುವಿನೆಡೆ ನೋಡಿದೆ, ಮುದ್ದಾಗಿತ್ತು ಮಗು, ಆದರೂ ಬಟ್ಟಲು ಕಣ್ಣಿನ ಹುಡುಗಿಯಷ್ಟಲ್ಲ. ಮಗುವಿನತ್ತ ತಿರುಗಿ ಮಗುವ ನಗಿಸುವ ಪ್ರಯತ್ನ ಮಾಡುತಲಿದ್ದೆ. ನನ್ನ ಪ್ರಯತ್ನದ ಪರಿಣಾಮವೋ, ಇಲ್ಲ ಅತ್ತು ಅತ್ತು ಬೇಜಾರಾಗಿಯೋ, ಮಗು ಅಳು ನಿಲ್ಲಿಸಿ ನಗಲು ಶುರು ಮಾಡಿತು. ಮುಗ್ದತೆಯ ಪರಮಾವಧಿಯಂತಿರುವ ನಗು, ಎತ್ತಿ ಮುತ್ತಿಕ್ಕುವಾಸೆಯಾಯ್ತು. “ಬರ್ತೀಯ ಇಲ್ಲಿ” ಎಂದೆ. ತನ್ನೆರದು ಪುಟ್ಟ ಕೈಗಳನ್ನು ನನ್ನತ್ತ ಚಾಚಿತು. ಬಾಚಿ ನನ್ನತ್ತ ಸೆಳೆದು ತೊಡೆ ಮೇಲೆ ಕೂರಿಸಿಕೊಂಡೆ.

ಮತ್ತೆ ಮಗುವಿನ ಜೊತೆ ಹತ್ತು ನಿಮಿಷ ಕಳೆದು ಹೋಯಿತು. ಇಷ್ಟೆಲ್ಲ ವಿಧ್ಯಾಮಾನವನ್ನು ಕೂತಲ್ಲೆ ವೀಕ್ಷಿಸುತಿದ್ದಳು ಬಟ್ಟಲು ಕಣ್ಣಿನ ಹುಡುಗಿ. ಯಾವುದೇ ಉದ್ದೇಶ ಇಲ್ಲದೆ ಮಾಡಿದ್ದರೂ, ನನ್ನ ಬಗ್ಗೆ ಒಳ್ಳೆಯ ನಿಲುವು ಬಂದಿರಬೇಕು ಆಕೆಗೆ. ಆಕೆಯ ದುಪ್ಫಟ್ಟವ ಹಿಡಿದೆಳೆಯುತಿದ್ದ ಮಗುವಿಗೆ ಬಗ್ಗಿ ಒಂದು ಮುತ್ತಿಕ್ಕಳು. ನಿದ್ದೆಗೆ ಜಾರಿದ ಮಗುವನ್ನು, ತಾಯಿಯ ತೋಳಿನಲ್ಲಿಟ್ಟು ನನ್ನ ಸೀಟಿಗೆ ಹಿಂದಿರುಗಿದೆ.

“ಮಗು ತುಂಬ ಮುದ್ದಾಗಿದೆ ಅಲ್ವ?” ಆಕೆಯ ಪ್ರಶ್ನೆ.
“ಹೌದು, ತುಂಬಾನೆ ಮುದ್ದಾಗಿದೆ” ನಾನಂದೆ.
“ಚಿಕ್ಕ ಮಕ್ಕಳು ಅಂದ್ರೆ ಇಷ್ಟನಾ ನಿಮಗೆ?”
“ಹೌದು, I just love kids”ಇನ್ನೊಂದು ನಗುವ ಹಿಂದಿರುಗಿಸಿದಳು. ಮುಂದೆ ಹೇಗೆ ಮುಂದುವರಿಸುವುದು ಎಂದು ತಡವರಿಸಹತ್ತಿದೆ.
ಅವಳೇ ಹೇಳಿದಳು, “ಎಷ್ಟೊಂದು ಸೆಕೆ!”
“ವಿಪರಿತ ಸೆಕೆ ಇದೆ, ನಿನ್ನೆ ಮಳೆ ಬಂದ ಕಾರಣ ಇರಬೇಕು.” ಇಷ್ಟೊತ್ತಿಗೆ ತುಸು ಧೈರ್ಯ ಬಂದಿತ್ತು.ಮುಂದುವರಿಸಿದೆ,
“ಎಲ್ಲಿ ನಿಮ್ಮ ಊರು?”
“ಮೂಲ್ಕಿಯ ಪಕ್ಕ, ನಿಮ್ಮದು?”
“ಉಡುಪಿಯ ಪಕ್ಕ ಬರುತ್ತೆ”

ಅಲ್ಲಿಗೆ ನಮ್ಮ ಕಿರು ಸಂವಾದಕ್ಕೊಂದು ಕಿರು ಅಂತ್ಯ. ಮತ್ತೆ ಅವಳ ಲೋಕ ಅವಳಿಗೆ, ಆದರೆ ನನ್ನ ಲೋಕದ ತುಂಬ ಅವಳೇ!ಆಕೆಯ ಕಣ್ಣುಗಳ ಕದ್ದು ನೋಡುವ ನನ್ನ ಪ್ರಯತ್ನ ಮತ್ತೆ ಮುಂದುವರಿಯಿತು. ಲೈಟ್ off ಮಾಡಿದ ಬಸ್ಸಿನ ಕ್ಲೀನರ್ ಹುಡುಗನಿಗೆ ಮನಸ್ಸಲ್ಲೇ ಶಾಪ ಹಾಕಿಕೊಂಡು ಸೀಟಿಗೊರಗಿ ಬರದ ನಿದ್ದೆಯ ಬಾ ಎಂದು ಪ್ರಾಥಿಸುತ್ತಾ ಕಣ್ಣು ಮುಚ್ಚಿದೆ. ತುಂಬ ತಡವಾಗಿ ಬಂದ ನಿದ್ದೆ ತುಂಬಾ ಅವಳೇ ತುಂಬಿದ್ದಳು.

ಉದಯ ನೇಸರನ ಕಿರಣ ಕಣ್ಣ ಸೋಕಿದಾಗ ನಿದ್ದೆಯಿಂದ ಎಚ್ಚೆತ್ತೆ. ಪಕ್ಕದಲ್ಲಿ ಅವಳಿನ್ನು ನಿದ್ದೆಯಲ್ಲಿದ್ದಳು. ತೆರೆದ ಕಿಟಕಿಯ ನುಸುಳಿ ಬಂದ ಸೂರ್ಯನಕಿರಣ ಆಕೆಯ ಕೆನ್ನೆಗೆ ಮುತ್ತಿಕ್ಕುವುದರ ಜೊತೆ, ಅವಳ ಕಣ್ಣ ರೆಪ್ಪೆ ಮೇಲೆ ಬೀಳುತಿತ್ತು. ಸೂರ್ಯನ ಮೇಲೊಂದಿಷ್ಟು ಕೋಪ, ಅಸೂಯೆ ಬಂದು, ಕಿಟಕಿಗೆ ಹಾಕಿದ ಪರದೆಯ ಸರಿಸಿ, ಆಕೆಯ ಮೇಲೆ ಬೆಳಕು ಬೀಳದಂತೆ ಮಾಡಿದೆ. ಅವಳ ತುಟಿ ಮೇಲೊಂದು ಕಿರು ನಗೆ, ಕಣ್ಣ ತೆರೆದು ನನ್ನತ್ತ ಕಿರು ನಕ್ಕಳು. ಆಕೆಯ ನಗೆಯ ಹಿಂದಿರುಗಿಸಿದೆ.
“ನಿದ್ದೆ ಬಂದಿರಲಿಲ್ಲ, ಹಾಗೆ ಕಣ್ಣು ಮುಚ್ಚಿದ್ದೆ, Thanks for moving the curtain”
“ಸೂರ್ಯನ ಮೇಲೆ ಹೊಟ್ಟೆಕಿಚ್ಚಾಯ್ತು, ಅದಕ್ಕೆ ಸರಿಸಿದೆ”, ನನಗರಿವಿಲ್ಲದೆ ಉತ್ತರಿಸಿದೆ!
“What!?”
“just kidding, ನಿದ್ದೆ ಹಾಳಗತ್ತೆ ಅಂತ ಅಷ್ಟೆ”ಅಕೆಯದು ಮತ್ತೊಂದು ನಗು, ನನ್ನ ನೋಟ ಅವಳ ಬಟ್ಟಲು ಕಣ್ಣ ಮೇಲಷ್ಟೆ.
“ಯಾಕೆ ನನ್ನ ಕದ್ದು ಕದ್ದು ನೊಡ್ತಾ ಇರೋದು ನೀವು?, ನಿನ್ನೆಯಿಂದ ನೊಡ್ತಾ ಇದ್ದೀನಿ”
ನಿರೀಕ್ಷೆ ಮಾಡದ ಪ್ರಶ್ನೆ! “ಸುಲಭದ ಪ್ರಶ್ನೆ, ಆದರೆ ಉತ್ತರ ತುಂಬಾನೆ ಕಷ್ಟ”
“ಇರಲಿ, ಏನು ನಿಮ್ಮ ಹೆಸರು?”
“ತೇಜಸ್, ನಿಮ್ಮದು?”
“ನವಮಿ”
“ಮುದ್ದಾಗಿದೆ ಹೆಸರು, ನಿಮ್ಮ ಬಟ್ಟಲು ಕಣ್ಣಿನ ಹಾಗೆ”
“ಬಟ್ಟಲು ಕಣ್ಣು!, ಎನದು?”
“ನಿಮ್ಮ ಕಣ್ಣಿಗೆ ನಾನಿಟ್ಟ ಹೋಲಿಕೆ, ತುಂಬು ಕಣ್ಣುಗಳು, ತುಂಬಾನೆ ಚೆನ್ನಾಗಿವೆ”
“Interesting and thank you”ಮುಂದುವರಿಸಿದಳು, “ಕದ್ದು ನೋಡಬೇಕಾಗಿಲ್ಲ, ಹಾಗೆನೇ ನೋಡಿ”
“ಕದ್ದು ನೊಡುವುದರಲ್ಲಿ ತುಂಬಾ ಸುಖವಿದೆ”
“ನಾನು ಕದ್ದು ನೋಡಬಹುದೇನೊ?” ಸ್ವಗತವೆಂಬಂತಿತ್ತು ಅವಳ ಮಾತು.
“ಉಹೂ, ಮುಜುಗರವಾಗತ್ತೆ ನನಗೆ”
“ನನಗೂ ಆಗಬಹುದಲ್ಲ..”
“ಕಷ್ಟ ಆದರೆ ನೋಡಲ್ಲ ಬಿಡಿ”
“ಅಷ್ಟೊಂದು ಇಷ್ಟ ಆದ್ರೆ ನೋಡಿ, ಪರವಾಗಿಲ್ಲ”ಅದೇನೋ ತ್ರಪ್ತಿಯ ನಗು ನನಗೆ.ಮತ್ತೆ ಮೌನ, ಹತ್ತು ನಿಮಿಷ ಕಳೆದಿರಬಹುದು.
“ನಾನು ಮುಂದಿನ stopನಲ್ಲಿ ಇಳಿತಿದೀನಿ”ಮೌನವೇ ನನ್ನ ಉತ್ತರ, ಅದೇ ವಾಕ್ಯ ಇನ್ನೊಮ್ಮೆ ಉಸುರಿದಳು.ಮತ್ತೆ ನೀರವ ಮೌನ, ನನ್ನ ನೋಟ ದೂರ ದಿಗಂತದತ್ತ ನೆಟ್ಟಿತ್ತು.ದೇಹದಲ್ಲಿರುವ ಶಕ್ತಿಯ ಒಗ್ಗೂಡಿಸಿ ಕೇಳಿದೆ,

“ನಿಮ್ಮ ಮೊಬೈಲ್ ನಂಬರ್ ಕೊಡ್ತೀರ?”ನನ್ನ ನೋಟ ಇನ್ನೂ ಆಕೆಯ ಕಡೆ ತಿರುಗಿರಲಿಲ್ಲ. ಆಕೆಯತ್ತ ತಿರುಗಿ, ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ, ಕಷ್ಟ ಅನ್ನಿಸಸುಮ್ಮನಾದೆ. ಒಂದು ನಿಮಿಷದ ಧೀರ್ಘ ಯೋಚನೆಯ ನಂತರ, ಆಕೆಯಿಂದ ಉತ್ತರ ಬಂತು!
“I want to be very honest with you! ನಾಳೆ ನನ್ನ engagement program ಇದೆ, ನಮ್ಮ ಮನೆಯಲ್ಲಿ.”
ಮನದಾಳದಿಂದ ಅರಿವಾಗದಂತ ಹೊಸ ನೋವಿನ ಉಧ್ಬವ ನನಗೆ.ಬಟ್ಟಲು ಕಣ್ಣಿನ ಹುಡುಗಿ ಮುಂದುವರಿಸಿದಳು,
“ನಿಮ್ಮ ಮೊಬೈಲ್ ನಂಬರ್ ತಗೋಬೇಕು, ನನ್ನ ನಂಬರ್ ಕೊಡಬೇಕು ಅಂತ ನಂಗೂ ಅನಿಸುತ್ತಿದೆ, ಆದರೆ ಮುಂದೆ ಏನು ಅನ್ನುವ ಪ್ರಶ್ನೆ ಕಾಡುತಿದೆ. ನಮ್ಮ ಈ ಚಿಕ್ಕ ಮುಖಮುಖಿಯಲ್ಲಿ ನಿಮ್ಮ ಪ್ರತಿಯೊಂದು ಭಾವನೆ, ಕ್ರೀಯೆ, ಪ್ರತಿಕ್ರೀಯೆ ನನಗಿಷ್ಟವಾಯ್ತು. ನಿಮ್ಮೊಂದಿಗೆ ಇದ್ದಷ್ಟು ನಾನು ನಿಮಗೆ ಸೋಲುವೆನೇನೊ ಎಂಬ ಭಯ. ನನ್ನ ತಂದೆ-ತಾಯಿ, ನನ್ನ ಮದುವೆ ಆಗುವ ಹುಡುಗನ, ನಾಳೆಯ ನನ್ನ ಬದುಕಿನ ನಿರೀಕ್ಷೆಗಳನ್ನೆಲ್ಲ ಕೆಡಿಸುವೆನೇನೋ ಎಂಬ ಆತಂಕ”ಒಂದು ಪೇಲವ ನಗೆಯ ಹೊರತು ಬೇರೆ ಪ್ರತಿಕ್ರೀಯೆ ನನ್ನಲ್ಲಿರಲಿಲ್ಲ. ತಲೆ ತಗ್ಗಿಸಿ ಕೂತೆ, ಸೋತು ಬಿದ್ದ ಯುದ್ದ ಕೈದಿಯಂತೆ.
“ಬದುಕಿನ ಪಯಣದಲ್ಲಿ ದೊರೆತ ಮಧುರ ಕ್ಷಣದ ಹರಿಕಾರ ನೀವು, ಮರೆಯಲಾರದ ಹುಡುಗ, ಮರೆಯಲಾರೆ ಕೂಡ, ನಾನಿನ್ನು ಇಲ್ಲೇ ಇಳಿಬೇಕು.”ಎದ್ದು ನಿಂತು ಅವಳ ಬ್ಯಾಗ್ ಎತ್ತಿ ಹೊರ ನಡೆದಳಾಕೆ, ಹೋಗೊ ಮೊದಲೊಂದು ಕೊನೆಯ ನೋಟ.ಬಸ್ಸು ನಿಂತು, ಅವಳು ಇಳಿದಿದ್ದು ಅಯ್ತು, ನನ್ನ ಯೋಚನೆಯ ಲಹರಿ ಇನ್ನೂ ನಿಂತಿಲ್ಲ!ಬಸ್ಸು ಮತ್ತೆ ಹೊರಟಿತು, ಕೊನೆಯೇ ಇಲ್ಲದ ರಹದಾರಿಯ ಕೊನೆ ನೋಡುವ ಛಲದಿಂದ, ತನಗೂ, ಈ ಮನುಷ್ಯರಿಗೂ ಯಾವ ಸಂಭಂದವಿಲ್ಲವೆಂಬಂತೆ.ಕಿಟಕಿಯ ಪರದೆ ಸರಿಸಿ, ಕತ್ತನ್ನು ಹೊರ ಹಾಕಿ, ಆಕೆ ಹೋದತ್ತ ನೋಡಿದೆ, ನನ್ನತ್ತ ತಿರುಗಿ ನೋಡಿ, ಮತ್ತೆ ತನ್ನ ದಾರಿಯ ಅನುಸರಿಸದಳಾಕೆ.ಬಟ್ಟಲು ಕಣ್ಣುಗಳ ಮತ್ತೆ ನೋಡುವ ಆಸೆಯಾಗಿ ಮತ್ತೆ ಮತ್ತೆ ಆಕೆಯ ದಾರಿಯತ್ತ ನೋಡುತಿದ್ದೆ.
“ತಿರುಗಿ ಒಮ್ಮೆ ನೋಡು ನನ್ನ, ಹಾಗೆ ಸುಮ್ಮನೆ” ಮನಸ್ಸಿಂದ ಹೊರಬಿತ್ತು ಭಾವನೆ ಹಾಡಾಗಿ, ನನಗರಿವಿಲ್ಲದೆ.

music: ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು, ಬರೆದು ಹೆಸರ ...